ಭೂತಾರಾಧನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಕಂಡುಬರುವ ಒಂದು ವಿಶಿಷ್ಟ ರೀತಿಯ ದೈವಾರಾಧಾನೆ.

	ಭೂತಾರಾಧಾನೆ ಭಾರತದ ಎಲ್ಲೆಡೆ ಒಂದಲ್ಲ ಒಂದು ರೀತಿಯಲ್ಲಿ ಕಂಡುಬರುವುದಾದರೂ ತುಳುನಾಡಿನ ಭೂತಗಳಲ್ಲಿಯೂ ಅವುಗಳ ಆರಾಧನೆಯಲ್ಲಿಯೂ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ಭೂತಗಳನ್ನು ಕುರಿತು ಹೇಳುವ ಸತ್ಕೋಳು-ಸತ್ಯದ ಚಿತ್ತ ಎಂಬ ಮಾತುಗಳು ಸತ್ಯದ ಪ್ರತ್ಯಕ್ಷ ರೂಪವೆಂದು ಅವರು ನಂಬಿ ಪೂಜಿಸುವುದನ್ನು ಸೂಚಿಸುತ್ತದೆ. ಇಲ್ಲಿ ಸಾಮಾನ್ಯವಾಗಿ ಪೂಜೆಗೊಳ್ಳುವ ಭೂತಗಳನ್ನು ಸ್ಥೂಲವಾಗಿ ಮೂರು ರೀತಿಯಲ್ಲಿ ವರ್ಗೀಕರಿಸಬಹುದು. ಪ್ರಾಣಿರೂಪದಲ್ಲಿರುವ ಭೂತ, ಮನುಷ್ಯನ ಮರಣಾನಂತರ ದೈವೀಕೃತವಾದ ಭೂತ, ಪುರಾಣದಿಂದ ಆಯ್ದುಕೊಂಡ ವ್ಯಕ್ತಿಗಳ ಭೂತ.

	ಹುಲಿ, ಹಂದಿ, ನಂದಿ, ಕೋಣ ಇತ್ಯಾದಿ ಪ್ರಾಣಿಗಳು ಮೊದಲನೆಯ ವರ್ಗದ ರೂಪದಲ್ಲಿ ಆರಾಧನೆಗೊಳ್ಳುತ್ತವೆ. (ನಂದಿಕೇಶ್ವರ, ಹುಲಿದೈವ, ಹಾಯಿಗುಳಿ, ಪಂಜುರ್ಲಿ, ನಂದಿಕೋಣ ಇತ್ಯಾದಿ).
	ಕೋಟಿಚೆನ್ನಯ್ಯ, ಅಬ್ಬಕ್ಕ-ದಾರಕ್ಕ, ಕೋಟೇದಬಬ್ಬು, ಕೋಟಿಪುಂಜದೆ ವುಪುಂಜ, ಕಲ್ಕುಡ-ಕಲ್ಕುರ್ಚಿ, ಕುಜುಂಬ-ಕಂಜ, ಕಾಂತಾಬಾರೆ-ಬೂದಾ ಬಾರೆ ಮೊದಲಾದ ವ್ಯಕ್ತಿಗಳು ಮಾನವರಾಗಿದ್ದಾಗ ವೀರ ಕೆಲಸ ಮಾಡಿ ಅಕಾಲ ಮರಣಕ್ಕೆ ತುತ್ತಾಗಿ ಅನಂತರ ಭೂತಗಳಾಗಿ ದೈವತ್ವ ಹೊಂದಿ ಪೂಜೆಗೊಳ್ಳುತ್ತವೆ. ಇವು ಎರಡನೆಯ ವರ್ಗಕ್ಕೆ ಸೇರುತ್ತವೆ. ಕೊಡಮೆಂತಾಯ, ಕಿಕ್ಕುಣಂತಾಯ, ಮಗ್ರಂದಾಯ, ಶಿವತ್ತಾಯ, ಅಣ್ಣಪ್ಪ, ಅಡ್ಕತ್ತಾಯ ಮೊದಲಾದ ದೈವಗಳನ್ನೂ ಈ ಗುಂಪಿಗೇ ಸೇರಿಸಬಹುದು. ಅನೇಕ ಭೂತಗಳು ಸನಾತನ ಧರ್ಮದಿಂದ ಬಂದವು. ಇಂಥವೂ ದೈವದ ರೂಪದಲ್ಲಿ ಆರಾಧನೆಗೊಳ್ಳುತ್ತವೆ. ಇವುಗಳಲ್ಲಿ ಬೇತಾಳ, ವೀರಭದ್ರ, ಭೈರವ, ಜುಮಾದಿ (ಧೂಮಾವತಿ), ಕಾಳಭೈರವಿ, ಚಾವುಂಡಿ (ಚಾಮುಂಡಿ), ಮಹಾಮಾಯ, ಭಗವತಿ, ಕನ್ಯಾಕುಮಾರಿ, ವನದುರ್ಗೆ ಪ್ರಮುಖವಾದುವು. ಮಲ್ಲರಾಯ, ಉಳ್ಳಾಳ್ತಿ, ಕರ್ನಪಾಡಿತಾಯ, ಕೊಡಮಣತಾಯ, ದೇಯಿ-ಮೊದಲಾದುವು ದೇವಿಯ ಅಂಶಗಳೆಂಬ ನಂಬಿಕೆಯಿದೆ. ತುಳುನಾಡಿನಲ್ಲಿ ಬೆರ್ಮೆ ಎಂಬ ದೈವ ಬ್ರಹ್ಮನ ಪ್ರತಿರೂಪವೇ ಆಗಿದೆ. ವೇದಬ್ರಹ್ಮನ ನಿರ್ದೇಶನ ಒಂದು ಕ್ರಮದಲ್ಲಿದ್ದರೆ ಬೆರ್ಮೆ ಎಂಬ ದೈವ ಭೂತಬ್ರಹ್ಮವಾಗಿ ಇನ್ನೊಂದು ರೀತಿಯಲ್ಲಿ ಪೂಜೆಗೊಳ್ಳುತ್ತದೆ. ಇವನಿಗೆ ನಾಲ್ಕು ಮುಖ ಮತ್ತು ನಾಲ್ಕು ಕೈಗಳು, ಕೈಗಳಲ್ಲಿ ಖಡ್ಗ, ಡಮರು ಕಪಾಲ ಮತ್ತು ಕಠಾರಿ ಮೊದಲಾದ ಆಯುಧಗಳಿವೆ. ತುಳುನಾಡಿನ ಎಲ್ಲ ಕಡೆ ಕಂಡುಬರುವ ಅಲೆಡೆಗಳಲ್ಲಿ, ಬ್ರಹ್ಮಸ್ಥಾನಗಳಲ್ಲಿ ಈ ಬ್ರಹ್ಮ ಪ್ರಧಾನ ದೈವವಾಗಿದ್ದು ಇವನೊಡನೆ ನಾಗ, ನಂದಿ ಕ್ಷೇತ್ರಪಾಲ ಮತ್ತು ರಕ್ತೇಶ್ವರಿ ಎಂಬ ನಾಲ್ಕು ದೈವಗಳೂ ಸೇರಿಕೊಂಡಿರುತ್ತವೆ. ಮೇಲೆ ಹೇಳಿದ ಈ ಎಲ್ಲವೂ ಮೂರನೆಯ ವರ್ಗಕ್ಕೆ ಸೇರುತ್ತವೆ.

	ಭೂತನೆಲೆಯ ಸ್ಥಳವನ್ನು ಭೂತಸ್ಥಾನ, ಭೂತಸಾನ ಎಂದು ಕರೆಯುತ್ತಾರೆ. ಭೂತಸ್ಥಾನಕ್ಕೆ ಅಲೆಡೆ, ಗರಡಿ, ಭೂತದ ಕಟ್ಟಗೆ ಎಂಬ ಹೆಸರುಗಳೂ ಇವೆ. ಇವು ಸಾಮಾನ್ಯವಾಗಿ 3.5 ಮೀ ಉದ್ದ, 2.5 ಮೀ ಅಗಲ, 3.5 ಮೀ ಎತ್ತರದ ಸಾಧಾರಣ ಗುಡಿಗಳಾಗಿರುತ್ತವೆ. ಇವಕ್ಕೆ ಕಿಟಕಿಗಳಿರುವುದಿಲ್ಲ. ಜನಪ್ರಿಯ ಭೂತಗಳಿಗೆ ಇದಕ್ಕೂ ದೊಡ್ಡದಾದ ಭೂತಸ್ಥಾನಗಳಿರುವುದುಂಟು. ಸ್ಥಾನದ ಒಳಗೆ ಮನುಷ್ಯರಂತೆ, ಪ್ರಾಣಿಗಳಂತೆ ರೂಪವಿರುವ ಹಿತ್ತಾಳೆಯ ಹಲವಾರು ಗೊಂಬೆಗಳಿರುತ್ತವೆ, ಜೊತೆಗೆ ತೂಗುಮಂಚ ಅಥವಾ ಕಾಲುಳ್ಳ ಮಂಚವಿರುತ್ತದೆ. ಇದನ್ನು ಭೂತದ ಮಂಚ ಎನ್ನುತ್ತಾರೆ. ಇದರ ಮೇಲೆ ಭೂತದ ಖಡ್ಗ ಹಾಗೂ ಗುಂಟೆ ಇರುತ್ತವೆ. ಭೂತಸ್ಥಾನದಲ್ಲಿ ಕಂಡುಬರುವ ಹುಲಿ, ಹಂದಿ ಕೋಣ, ಎತ್ತು ಮೊದಲಾದವುಗಳು ವಿಗ್ರಹಗಳನ್ನು ಭೂತವಾಹನಗಳಾಗಿ ಉಪಯೋಗಿಸುವುದರ ಜೊತೆಗೆ, ಅವನ್ನೂ ಭೂತಗಳ ಪರಿವಾರವೆಂದು ಕರೆದು ವಿಶೇಷ ಸಂದರ್ಭಗಳಲ್ಲಿ ಪೂಜಿಸುವುದೂ ಉಂಟು. ಹೀಗೆ ಪೂಜಿಸುವಾಗ ಭೂತದ ಬಳಿ ಒಂದು ಕತ್ತಿ, ಕಂಚಿನ ಕಳಸದಲ್ಲಿ ನೀರು ದೀಪ ಇಟ್ಟಿರುತ್ತಾರೆ.

	ಪೂಜೆ ರೀತಿಯಲ್ಲಿ ಆಯಾ ಭೂತದ ರೌದ್ರಭಾವನೆಗೆ ಅನುಗುಣವಾಗಿ ಕುಣಿತದ ಮೂಲಕ ಪೂಜೆಯಾಗುತ್ತದೆ. ಭೂತವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಪಾತ್ರಿ ಎನ್ನುತ್ತಾರೆ. ಒಂದೊಂದು ಭೂತಕ್ಕೂ ಅದಕ್ಕೊಪ್ಪುವ ಅಲಂಕಾರ, ವೇಷ, ಮುಖ ವರ್ಣಿಕೆ ಇರುತ್ತವೆ. ಮೈಗೆ ಕೆಂಪುಬಟ್ಟೆ, ನಡುವಿಗೆ ನೆರಿಗೆಯುಳ್ಳ ಲಂಗ, ತಲೆಗೆ ಕಿರೀಟ (ಅಣೆ), ಕಾಲಿಗೆ ಗಗ್ಗರ, ಸೊಂಟಕ್ಕೆ ದಟ್ಟಿ, ತೋಳಿಗೆ ವಂಕಿ, ಕೈಗೆ ಬಳೆ, ಎದೆಗೆ ಕಂಚಿನ ರಕ್ಷೆ, ಕಿವಿಗೆ ಮತ್ತು ಹಣೆಗೆ ಅಲಂಕಾರ ಇರುತ್ತದೆ. ಒಮ್ಮೊಮ್ಮೆ ಆಯಾ ಭೂತದ ಮುಖವಾಡ ಧರಿಸಿ ಕುಣಿಯುವುದೂ ಉಂಟು. ಭೂತಾರಾಧನೆ ಕೆಲವೊಮ್ಮೆ ಸಾರ್ವಜನಿಕವಾಗಿಯೂ ಒಂದೊಂದೆ ಮನೆಯಲ್ಲಿಯೂ ನಡೆಯುತ್ತದೆ. ಬತ್ತ, ಅಕ್ಕಿ, ಬತ್ತದ ಅರಳು, ಎಳನೀರು, ತೆಂಗಿನಕಾಯಿ, ಅಡಿಕೆ, ಹೊಂಬಾಳೆ, ತೆಂಗಿನ ಗರಿ—ಇವು ಭೂತಾರಾಧನೆಯ ಮುಖ್ಯ ವಸ್ತುಗಳು. ಎಲ್ಲ ರೀತಿಯ ಭೂತ ಕಟ್ಟುವಾಗಲೂ ಕೈಯಲ್ಲಿ ದೀವಟಿಗೆಯಿರುತ್ತದೆ.

	ದಕ್ಷಿಣ ಕನ್ನಡ ಜಿಲ್ಲೆಯ ತುಳು ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕನ್ನಡ ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕೆಲವು ವೈಶಿಷ್ಟ್ಯಗಳೂ ವ್ಯತ್ಯಾಸಗಳೂ ಕಂಡುಬರುತ್ತವೆ. ತುಳು ಮಾತನಾಡುವಲ್ಲಿ ಕೆಲವೇ ನಿಶ್ಚಿತ ಜಾತಿಗೆ ಸೇರಿದ—ಮುಖ್ಯವಾಗಿ ಬೈದ್ಯ, ನಲಿಕೆ, ಪರವ, ಪಂಬರ, ಪಾಣಾರ—ಜನ ಮಾತ್ರ ಭೂತಾರಾಧನೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಒಂದು ಭೂತವನ್ನು ಇಂಥವನೇ ಪೂಜಿಸಬೇಕೆಂಬ ನಿಯಮವಿದೆ. ಆತ ಆಯಾ ದೈವಗಳ ವೇಶ ಕಟ್ಟಿ ಕುಣಿಯುತ್ತಾನೆ. ಭಕ್ತರು ಆತನಲ್ಲೆ ತಮ್ಮ ಅಭೀಷ್ಟಗಳನ್ನು ಕೇಳಿಕೊಂಡು ಅವನ್ನು ನೆರವೇರಿಸಿಕೊಳ್ಳುತ್ತಾರೆ. ಕನ್ನಡ ಮಾತನಾಡುವ ಪ್ರದೇಶದಲ್ಲಿ ಭೂತಗಳಿಗೆ ಪೂಜೆ ಸಲ್ಲಿಸುವವರು ಬ್ರಾಹ್ಮಣರಲ್ಲಿ ವೈದ್ಯರೆಂಬ ಒಂದು ಪಂಗಡಕ್ಕೆ ಸೇರಿದ ಜನ. ಪೂಜೆಗೊಳ್ಳುವ ಪ್ರಮುಖ ಭೂತಗಳೆಂದರೆ ಬೊಬ್ಬರ್ಯ, ಮಾಣಿ, ಜಟ್ಟಿಗ. ಇಲ್ಲಿ ಪಾತ್ರಿಗೆ ಯಾವುದೇ ವಿಶೇಷ ರೀತಿಯ ವೇಷಭೂಷಣಗಳಿರುವುದಿಲ್ಲ. ಒಂದೇ ಗುಡಿಯಲ್ಲಿ ಅನೇಕ ದೈವಗಳ ಗೊಂಬೆಗಳಿರುತ್ತವೆ. ಈ ಭೂತಗಳಿಗೆ ಪಾಡ್ಡನಗಳಿಲ್ಲ; ಸರಿಯಾದ ಕಥೆಯಿಲ್ಲ. ಈ ದೈವಗಳಿಗೆ ವರ್ಷಕ್ಕೊಂದು ಸಲ ಎಥವಾ ವಿಶಿಷ್ಟ ಸಂದರ್ಭಗಳಲ್ಲಿ ಕೋಲ, ನೇಮ, ಬಲಿ, ಅಗಲು, ತಂಬೆಲ. ಬಂಡಿ ಮೊದಲಾದ ವಿವಿಧ ರೀತಿಯ ಉತ್ಸವ ಹಾಗೂ ಸೇವೆ ಜರುಗುತ್ತವೆ. ಕೋಲ ಮತ್ತು ನೇಮ ದೈವದ ನೃತ್ಯಸಹಿತ ಉತ್ಸವದ ರೂಪದಲ್ಲಿ ನಡೆಯುತ್ತವೆ. ನೇಮ ಹೆಚ್ಚಾಗಿ ರಾತ್ರಿ ನಡೆಯತ್ತದೆ. ಅಗಲು ಸಾಮಾನ್ಯವಾಗಿ ಕೋಲದ ಹಿಂದಿನ ರಾತ್ರಿ ನಡೆಯುತ್ತದೆ. ಕೋಲವನ್ನು ಹೆಚ್ಚಾಗಿ ಪಂಬರರು, ಪರವರು, ನಲಿಕೆಯವರು ಕಟ್ಟುತ್ತಾರೆ. 'ಪರ್ವ ಭೂತಗಳಿಗೆ ಇನ್ನೊಂದು ರೀತಿಯಲ್ಲಿ ನಡೆಯುವ ಪೂಜೆ.
ನೇಮ, ಊರವರೆಲ್ಲ ಸೇರಿ ನಡೆಸುವ, ಸ್ವಲ್ಪ ಹಿರಿಯ ಪ್ರಮಾಣದ ಉತ್ಸವ. ಎರಡೋ ಮೂರೋ ದಿನ ನಡೆಯಬಹುದು. ನೇಮವನ್ನು ಅಯನ ಎಂದು ಕರೆಯುವುದೂ ಇದೆ. ಹೆಚ್ಚಾಗಿ ಇಂಥ ಉತ್ಸವಕ್ಕೆ ಕೊಡಿ (ಧ್ವಜ) ಏರಿಸುವ ಕ್ರಮವಿದೆ. ನೇಮಕ್ಕೆ ಕೆಲವು ದಿನ ಮುಂಚೆ ಕೋಳಿಕುಂಟ ಎಂಬ ವಿಧಿ ಜರುಗುವುದುಂಟು. ಅಂದು ನೇಮಕ್ಕಾಗಿ ಬಾಳೆಗೊನೆ ಕಡಿಯುವ ಗೊನೆಮುಹೂರ್ತ ಎಂಬ ಕ್ರಮ ಇದೆ (ಕೋಳಿಕುಂಟವಾದ ಮೇಲೆ ಆ ಊರನ್ನು ಬಿಟ್ಟು ಯಾರೂ ದೂರ ಪ್ರಯಾಣ ಕೈಗೊಳ್ಳಬಾರದೆಂಬ ಕಟ್ಟಳೆ ಇದೆ). ಊರ ಜನವರ್ಗದ ಪ್ರತಿನಿಧಿಗಳೂ ದೈವದ ಸೇವೆಗೆ ಸಂಬಂಧಪಟ್ಟ ಪೂಜಾರಿ ಮುಂತಾದ ವ್ಯಕ್ತಿಗಳೂ ಸಕಲ ಬಿರುದಾವಳಿಗಳಿಂದ ಭೂತದ. ಭಂಡಾರವನ್ನು (ಆಯುಧ, ಮೊಗ ಮುಂತಾದ ಪೂಜಾ ಸಾಮಗ್ರಿಗಳನ್ನು) ಭೂತಸ್ಥಾನಕ್ಕೆ ಒಯ್ಯುತ್ತಾರೆ. ಉತ್ಸವದ ಸಂದರ್ಭದಲ್ಲಿ ಆಯಾ ಭೂತದ ಹುಟ್ಟುಕಟ್ಟುಗಳನ್ನು ಭೂತಕ್ಕೆ ಕಟ್ಟುವವರೂ ಅವರ ಸಂಗಡಿಗರೂ ತೆಂಬರೆ ಎಂಬ ವಾದ್ಯದ ಬಡಿತದೊಂದಿಗೆ ರಾಗವಾಗಿ ಹಾಡುತ್ತಾರೆ. ಒಂದೇ ವೇಳೆ ಎರಡು ಅಥವಾ ಮೂರು ಭೂತಗಳು ಕಾಣಿಸಿಕೊಳ್ಳಬಹುದು. ಬೇರೆ ಬೇರೆ ಭೂತಗಳನ್ನು ಒಬ್ಬನೇ ವ್ಯಕ್ತಿ ಒಂದಾದ ಮೇಲೆ ಒಂದರಂತೆ ಆವೇಶ ಬರಿಸಿಕೊಳ್ಳಬಹುದು.

	ನೇಮದ ವೇಳೆ ಕಟ್ಟುವ ಭೂತವೇಷಗಳು ಆಯಾ ಭೂತದ ಸ್ವಭಾವ ಸ್ವರೂಪಗಳಿಗೆ ತಕ್ಕುದಾಗಿರುತ್ತವೆ. ಮುಖವರ್ಣಿಕೆ, ಉಡುಪು ತೊಡುಪು, ಅಣಿಗಳಲ್ಲಿ (ಬೆನ್ನುಹಿಂದಕ್ಕೆ ಕಟ್ಟಿ ಕೊಳ್ಳುವ ಅಗಲವಾದ ರಚನೆ) ಸಾಕಷ್ಟು ವೈವಿಧ್ಯವಿರುತ್ತದೆ. ಕುಣಿತದ ವೈಖರಿಯಲ್ಲೂ ಹಾಗೆಯೇ. ನೇಮಕ್ಕೆ ಸಂಬಂಧಪಟ್ಟಂತೆ ವಾಲಸಿರಿ (ಹೊರಸವಾರಿ), ಬಂಡಿ ಮೊದಲಾದ ಸಮಾರಂಭಗಳೂ ಜರಗುವುದುಂಟು. ವಾಲ ಸಿರಿ ಭೂತಸ್ಥಾನದ ಆವರಣದ ಹೊರಗೆ ನಡೆಯುತ್ತದೆ. ಎಲ್ಲ ಭೂತಸ್ಥಾನಗಳಲ್ಲಿ ಬಂಡಿ ಇರಬೇಕೆಂದಲ್ಲ. ಬಂಡಿ ಇದ್ದಲ್ಲ ಅದನ್ನು ಸಿಂಗರಿಸಿ ಎಳೆಯುತ್ತಾರೆ. ಬಂಡಿಗಳಲ್ಲಿ ಹುಲಿ, ಹಂದಿ, ಕುದುರೆ ಮುಂತಾದವುಗಳ ಮೇಲೆ ಕುಳಿತಿರುವ ಭೂತಗಳ ವಿಗ್ರಹಗಳಿರುತ್ತವೆ. ವಿಗ್ರಹಗಳಿಲ್ಲದಿದ್ದಲ್ಲಿ ಭೂತವೇಷವನ್ನು ತೊಟ್ಟ ವ್ಯಕ್ತಿಯೇ ಕುಳಿತುಕೊಳ್ಳುತ್ತಾನೆ. ನೇಮದ ಅಂಗವಾಗಿ ತಪ್ಪಂಗಾಯಿ, ಸೊಟೆದಾರೆ ಮೊದಲಾದ ವಿನೋದಗಳೂ ಕೋಳಿ ಅಂಕವೂ ನಡೆಯುವುದುಂಟು. ಭೂತಗಳಲ್ಲಿಯೂ ಸೀಮೆಯ ರಾಜಂದೈವ, ಗ್ರಾಮದ ದೈವ, ಜಾಗದ ದೈವ, ಕುಟುಂಬದ ದೈವ, ಮನೆಯ ದೈವ—ಹೀಗೆ ಪ್ರತ್ಯೇಕವಾದ ವ್ಯವಸ್ಥೆ ಇದೆ. ಕೆಲವೊಮ್ಮೆ ವಿಶಿಷ್ಟ ಕಾರಣಗಳಿಗಾಗಿ ಧರ್ಮನೇಮ ಎಂಬ ವಿಶೇಷೋತ್ಸವವನ್ನು ಜರಗಿಸುವುದುಂಟು. ಅದರ ಅಂಗವಾಗಿ ಅನ್ನಸಂತರ್ಪಣೆಯೂ ನಡೆಯುವುದಿದೆ.

	ಕೋಲ ಎಂದರೆ ಅಲಂಕಾರ ಎಂದರ್ಥ. ಭೂತ ವೇಷಧಾರಿಗೆ ತೊಡಿಸುವ ವಿಶೇಷ ವೇಷ ಪರಿಕರಗಳ ಬೆಡಗಿನಿಂದಾಗಿ ಸಂಬಂಧಪಟ್ಟ ಉತ್ಸವಕ್ಕೂ ಅದೇ ಹೆಸರು ಬಂದಿದೆ. ಕೋಲವನ್ನು ವಾಡಿಕೆಯಂತೆ ವರ್ಷಕ್ಕೊಂದು ಬಾರಿ ನಿರ್ದಿಷ್ಟ ಸ್ಥಳದಲ್ಲಿ ನಿಶ್ಚಿತ ದಿನಗಳಲ್ಲಿ ಜರಗಿಸಬಹುದು; ಅಥವಾ ವಿಶೇಷ ಸೇವೆಯಾಗಿ ಬೇರೆಯೇ ಸಂದರ್ಭಗಳಲ್ಲಿಯೂ ನಡೆಯಿಸಬಹುದು. ಕೋಲದ ಚಪ್ಪರಕ್ಕೆ ಪತಾಕೆಯ ರೂಪದಲ್ಲಿ ಮಡಿವಾಳನು ಬಿಳಿ ಅಥವಾ ಕೆಂಪು ಬಟ್ಟೆ ಕಟ್ಟುವುದಿದೆ. ಎಳನೀರು, ಸೌತೆ, ಕುಂಬಳ ಮುಂತಾದವನ್ನು ಚಪ್ಪರದಲ್ಲಿ ತೂಗಿಸುತ್ತಾರೆ. ಕೋಲಕ್ಕೆ ಮೊದಲು ಮಣ್ಣು ಮುಹೂರ್ತ ಎಂಬ ವಿಧಿ ಜರುಗುವುದಿದೆ. ಕೋಲ ಜರಗಬೇಕಾದ ಸ್ಥಳದ ತುಸು ಮಣ್ಣನ್ನು ಆಯಾಸ್ಥಾನದ ಪೂಜಾರಿ ತಂದು ಬ್ರಹ್ಮನಿಗೂ ಇತರ ಪ್ರಧಾನ ದೇವತೆಗೂ ತೋರಿಸಿ, ಗಂಧಿ ಪ್ರಸಾದ ಸ್ವೀಕರಿಸಿ ಒಳಗೆ ಹೊರಗೆ ತುಲಸಿಕಟ್ಟೆ, ಪಾಗಾರ ಮುಂತಾದ ಎಡೆಗಳಲ್ಲಿ ಎಲ್ಲೆಲ್ಲಿ ಬಿರುಕುಗಳಿವೆಯೋ ಅಲ್ಲಿಗೆ ಮಣ್ಣನ್ನು ಮೆತ್ತಿ ಜಾಗವನ್ನು ಪ್ರಶಸ್ತಗೊಳಿಸುವನು. ಕೋಲದ ಚಪ್ಪರದ ನಡುವೆ ಗರಡಿಯ ಒಳಗೆ ನೆಲದಲ್ಲಿ ವಿವಿಧ ರೀತಿಯ ಮಂಡಲಗಳನ್ನು ಬಣ್ಣದ ಪುಡಿಗಳಿಂದ ಬರೆಯುವುದುಂಟು. ಮಂಡಲದ ಮೇಲಕ್ಕೆ ನೇರವಾಗಿ ಒಂದು ತೆಂಗಿನಕಾಯನ್ನು ವಿಧಿಪೂರ್ವಕವಾಗಿ ತೂಗಿಸುತ್ತಾರೆ. ಇದಕ್ಕೆ ಕುಕ್ಯಾಲಿ ಎಂದು ಹೆಸರು.

	ಕೆಲವು ಕೋಲಗಳಿಗೆ ಭಂಡಾರ ಹೋಗುವ ಕ್ರಮವಿದೆ, ಭೂತದ ಮೊಗ, ಬೆಳ್ಳಿ ಒಂಗಾರದ ನಗನಾಣ್ಯಗಳೇ ಮುಂತಾದ ವೇಷ ಸಾಮಗ್ರಿಗಳೂಸುರಿಗೆ ಮುಂತಾದ ಆಯುಧಗಳೂ ನಿಶಾನಿ, ಗಣಿ, ದೀವಟಿಗೆ, ಸತ್ತಿಗೆ ಮುಂತಾದ ಬಿರ್ದಿನಿಂದ ಕೊಂಬುವಾಲಗದೊಂದಿಗೆ ಕೋಲದ ಚಪ್ಪರದದೆಡೆಗೆ ಸಾಗುವುವು. ಭೂತದ ವೇಷಕ್ಕೆ ತೆಂಗಿನ ಎಳೆಯಗರಿ, ಕೇಪಳದಹೂ, ಅರದಾಳ, ಮಸಿ, ಇಂಗಳಿಕ, ಕೆಂಪುವಸ್ತ್ರ, ದಗಲೆ, ಗೆಜ್ಜೆ, ಗಗ್ಗರ, ಕೈದಂಡೆ, ನೆತ್ತಿಪಟ್ಟ, ಚಪ್ಪರಕೊಂಬು, ಮಾಲೆಗಳು, ಅಣಿ ಮೊದಲಾದವನ್ನು ಉಪಯೋಗಿಸುತ್ತಾರೆ. ಆಯಾ ಭೂತದ ಸ್ವರೂಪ, ಸ್ವಭಾವಗಳಿಂದ ತಕ್ಕ ಅಣಿಯನ್ನೂ ಮಖವರ್ಣಿಕೆಯನ್ನೂ ಇತರ ಪರಿಕರಗಳನ್ನೂ ಬಳಸುತ್ತಾರೆ. ಕೋಲ ಕಟ್ಟುವ ವ್ಯಕ್ತಿ ವೇಷ ಪೂರೈಸಿ ಗಗ್ಗರ (ವಿಶೇಷ ರೀತಿಯ ದೊಡ್ಡ ಕಂಚಿನ ಕಡಗ) ಇಡುವಾಗ ಮರಳಿ ಗುತರಿಕಾರರು "ಇಟ್ಟ ಗಗ್ಗರದಲ್ಲಿ ಸುತ್ತಿದ ಗರಿಯಲ್ಲಿ ಹದಿನಾರು ಕಲೆ ಪರಿಪೂರ್ಣವಾಗಿ ತುಂಬಿ ಬಂದು ಹಿಂದೆ ನಮ್ಮ ಹಿರಿಯರನ್ನು ಹೇಗೆ ರಕ್ಷಿಸಿದೆಯೋ ಅಂತೆಯೇ ನಮ್ಮ ಬಿನ್ನಹವನ್ನು ಹೇಳಿ ನಮ್ಮ ಈ ಸಂಸಾರವನ್ನು ಹೂವಿನ ಹಿತ್ತಿಲಿನಂತೆ ಕಾಪಾಡುವ ಅಧಿಕಾರ ನಿನಗೆ ಸೇರಿದ್ದು" ಎಂದು ಪ್ರಾರ್ಥಿಸುತ್ತಾರೆ. ತಾರಸ್ವರದಲ್ಲಿ ವಾದ್ಯಗಳು ಭೋರ್ಗರೆಯಲು ದೈವ ಆವೇಶವಾಗಿ ಉಗ್ರವಾಗಿ ಕುಣಿಯುತ್ತದೆ. ಈ ನರ್ತನ ಮನರಂಜನೆಯ ಭಾಗವೂಅಹುದು. ಮುಂದೆ, ಬಂದವರನ್ನು ಅವರ ಅಂತಸ್ತು ಪ್ರಕಾರ ನುಡಿಯಿಸಿ, ನ್ಯಾಯಗಳಿದ್ದರೆ ಕೇಳಿ ಇತ್ಯರ್ಥ ಮಾಡಿ ಕೊನೆಗೆ ಎಲ್ಲರಿಗೂ ಅವರವರ ಸಾಮಾಜಿಕ ಅಂತಸ್ತಿಗೆ ಅನುಸರಿಸಿ ಪ್ರಸಾದ ವಿತರಣೆ ಮಾಡುತ್ತದೆ.

	ಇತ್ತೀಚೆಗೆ ಕೆಲವು ಭೂತಸ್ಥಾನಗಳು ದೇವಾಲಯದ ರೂಪ ತಾಳಿವೆ. ಸಾಮಾನ್ಯವಾಗಿ ಎಲ್ಲ ಭೂತಸ್ಥಾನಗಳಲ್ಲೂ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಕೆಲವು ಜಾತ್ರೆಗಳು ಒಂದು ವಾರ ಪರ್ಯಂತವೂ ನಡಿಯುವುದುಂಟು. ದೈವಕ್ಕೆ ಸಂಬಂಧಪಟ್ಟ ಹಾಡುಗಳನ್ನು ಪಾಡ್ದನಗಳು ಎನ್ನುತ್ತಾರೆ. ಇವು ಸಾಮಾನ್ಯವಾಗಿ ಭೂತದ ಸಾಂಪ್ರದಾಯಿಕ ಇತಿಹಾಸ ನಿರೂಪಿಸುವ ಹಾಡುಗಳು. ಬ್ರಾಹ್ಮಣರು ಭೂತಾರಾಧನೆ ಮಾಡುವುದಿಲ್ಲವಾದರೂ ಅದರ ಪೌರೋಹಿತ್ಯ ಮುಂತಾದ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. 										
(ಎ.ಎಸ್‍ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ